ಶ್ರೀ ತಾಯ್ನಾಡು ರಾಘವೇಂದ್ರ

ಶ್ರೀ ತಾಯ್ನಾಡು ರಾಘವೇಂದ್ರ ಅವರ ಜೀವನ ಪಯಣದ ಹೃದಯಭಾಗದಲ್ಲಿ ಸಾಮಾಜಿಕ ಸೇವೆ ಮತ್ತು ಕನ್ನಡ ಅಸ್ಮಿತೆಯ ಬಗ್ಗೆ ಅಚಲವಾದ ಬದ್ಧತೆ ಇದೆ. ಕನ್ನಡಕ್ಕಾಗಿ ಸದಾ ಸ್ಪಂದಿಸುವ ಇವರು, ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲೆಂದೇ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸೇವಾ ಟ್ರಸ್ಟ್‌ ಎಂಬ ಕ್ರಿಯಾತ್ಮಕವಾದ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದರು. ಈ ಟ್ರಸ್ಟ್‌ನ ಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರೂ ಆದ ಇವರು, ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವುದು, ಕನ್ನಡ ಪರಂಪರೆಯನ್ನು ರಕ್ಷಿಸುವುದು ಮತ್ತು ಕನ್ನಡ ಮಾತನಾಡುವ ಜನರ ಹಕ್ಕುಗಳನ್ನು ರಕ್ಷಿಸುವತ್ತ ಗಮನಹರಿಸುವ ಹಲವಾರು ಚಳುವಳಿಗಳು, ಜಾಗೃತಿ ಅಭಿಯಾನಗಳು ಮತ್ತು ಸೇವಾ ಚಟುವಟಿಕೆಗಳನ್ನು ಮುನ್ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಹೆಚ್ಚಿ ಅಂಚೆ ವ್ಯಾಪ್ತಿಯಲ್ಲಿರುವ ಬಾಡದಬೈಲು ಎಂಬ ಗ್ರಾಮದವರಾದ ರಾಘವೇಂದ್ರ ಅವರು ಶ್ರೀಮತಿ ಕುಸುಮಮ್ಮ ಮತ್ತು ವೀರಭದ್ರಪ್ಪಗೌಡರ ಪುತ್ರರು. ಶೈಕ್ಷಣಿಕವಾಗಿ ಹೆಚ್ಚು ಸಾಧಿಸದಿದ್ದರೂ, ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂಬ ಹಂಬಲದಿಂದ ಸ್ವಯಂ ಉದ್ಯೋಗಕ್ಕೆ ಮುಂದಾದರು. ತಾವು ಬೆಳೆಯುವ ಜೊತೆಗೆ ಸಮಾಜದ ಒಳಿತಿಗೆ ದುಡಿಯಬೇಕೆಂಬ ಹಂಬಲವೂ ಅವರಲ್ಲಿತ್ತು. ನಾಡು-ನುಡಿಯ ಮೇಲೆ ಚಿಕ್ಕಂದಿನಿಂದಲೂ ಅಭಿಮಾನ ಹೊಂದಿದ್ದ ರಾಘವೇಂದ್ರ ಅವರು ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಕನ್ನಡ ಭಾಷೆಗೆ ಸಂಕಟ ಎದುರಾದಾಗಲೆಲ್ಲಾ ದನಿ ಎತ್ತಲಾರಂಭಿಸಿದರು. ಕನ್ನಡಿಗರಿಗೆ ಅನ್ಯಾಯವಾದಾಗಲೆಲ್ಲಾ ಪ್ರತಿಭಟಿಸಿದರು.

ವ್ಯವಹಾರ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ರಾಘವೇಂದ್ರ ಅವರು, **ತಾಯ್ನಾಡು ರಾಘವೇಂದ್ರ ಸರ್ವೀಸಸ್ ಪ್ರೈ. ಲಿ. (TAAYNADU RAGHAVENDRA SERVICESS PVT LTD)** ಸಂಸ್ಥೆಯನ್ನು ಸ್ಥಾಪಿಸಿ, ಜವಳಿ ಉದ್ಯಮ, ಆಂಬ್ಯುಲೆನ್ಸ್ ಸೇವೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಇವರ ನಾಯಕತ್ವದಲ್ಲಿ, **”ಲೈಫ್‌ರೈಡ್”** ಎಂಬ ಅತ್ಯಾಧುನಿಕ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿ ತುರ್ತು ಸೇವೆಯ ಅಗತ್ಯವಿರುವವರಿಗೆ ನೆರವಾಗುತ್ತಿದೆ. ನೂರಾರು ಯುವಕ-ಯುವತಿಯರಿಗೆ ಉದ್ಯೋಗ ನೀಡಿರುವ ಇವರು ಸಮರ್ಥ ಉದ್ಯಮಿ.

ತಮ್ಮ ಸೇವಾ ಕಾರ್ಯಗಳನ್ನು ಗುರುತಿಸಿ, ಝೀ ಕನ್ನಡ ಸುದ್ದಿವಾಹಿನಿ 2024 ರಲ್ಲಿ **”ವೀರ ಕನ್ನಡಿಗ”** ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜೊತೆಗೆ **”ಸಂಘಟನಾರತ್ನ”** ಪ್ರಶಸ್ತಿ ಮತ್ತು ರಾಜ್ಯಮಟ್ಟದ **”ಅಮ್ಮ ಪ್ರಶಸ್ತಿ”** ಕೂಡಾ ಲಭಿಸಿದೆ.